Hindusthan Samachar
Banner 2 रविवार, सितम्बर 23, 2018 | समय 06:16 Hrs(IST) Sonali Sonali Sonali Singh Bisht

ವಿಶ್ವಾಸ ಮತ ಯಾಚನೆಗೆ ನಾಳೆ ಸಂಜೆ 4ಕ್ಕೆ ಸಮಯ ನಿಗದಿ - ಸುಪ್ರೀಂ ಆದೇಶ

By HindusthanSamachar | Publish Date: May 18 2018 1:34PM
ವಿಶ್ವಾಸ ಮತ ಯಾಚನೆಗೆ ನಾಳೆ ಸಂಜೆ 4ಕ್ಕೆ ಸಮಯ ನಿಗದಿ - ಸುಪ್ರೀಂ ಆದೇಶ
ನವದೆಹಲಿ, ಮೇ.18 (ಹಿ ಸ) – ಯಡಿಯೂರಪ್ಪ ಆಯ್ಕೆ ಬಗ್ಗೆ ರಾಜ್ಯಪಾಲರ ತೀರ್ಮಾನ ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಸಲ್ಲಿಸಿದ್ದ ಅರ್ಜಿಯನ್ನು ಸುದೀರ್ಘ ವಿಚಾರಣೆ ನಡೆಸಿ ನಾಳೆ ಸಂಜೆ 4ಗಂಟೆಗೆ ಬಹುಮತ ಸಾಬೀತಿಗೆ ಸಮಯ ನಿಗದಿ ಮಾಡಿ ನ್ಯಾಯಮೂರ್ತಿ ಎ.ಕೆ. ಸಕ್ರಿ ಅವರನ್ನೊಳಗೊಂಡ ಪೀಠ ಆದೇಶ ಹೊರಡಿಸಿದೆ. ಪ್ರಮಾಣ ವಚನ ಸಮಾರಂಭಕ್ಕೆ ಅವಕಾಶ ನೀಡಕೂಡದು ಎಂದು ಕೋರಿ ಕಾಂಗ್ರೆಸ್–ಜೆಡಿಎಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎಸ್.ಎ. ಬೋಬ್ಡೆ ಹಾಗು ಅಶೋಕ್ ಭೂಷಣ್ ಅವರಿದ್ದ ತ್ರಿಸದಸ್ಯ ಪೀಠ ನಡೆಸಿತು. ಕರ್ನಾಟಕದ ರಾಜ್ಯಪಾಲರು ಯಾವ ಆಧಾರದ ಮೇಲೆ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಕೊಟ್ಟರು? ಎಂದು ಸುಪ್ರಿಂ ಕೋರ್ಟ್ ನ್ಯಾಯಾಧೀಶರು ಪ್ರಶ್ನಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ನ ಶಾಸಕರು ಆ ಎರಡೂ ಪಕ್ಷಗಳಿಗೆ ಲಿಖಿತ ಬೆಂಬಲ ನೀಡಿಲ್ಲ ಎಂಬ ಮಾಹಿತಿ ನಮ್ಮಲ್ಲಿ ಇದೆ ಎಂದು ಬಿಜೆಪಿ ಪರ ವಕೀಲ ಮುಕುಲ್ ರೋಹಟಗಿ ಸುಪ್ರೀಂ ಕೋರ್ಟ್ ಗೆ ತಿಳಿಸಿದರು. ಹೆಚ್ಚು ಸ್ಥಾನ ಪಡೆದವರನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಟ್ಟಿತು. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವುದು ಅತ್ಯುತ್ತಮ ಆಯ್ಕೆ ಅನಿಸುತ್ತದೆ ಎಂದು ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ ಅರ್ಜುನ್ ಕುಮಾರ್ ಸಿಕ್ರಿ ಹೇಳಿದರು. ಸರ್ಕಾರ ರಚನೆಗೆ ಅವಕಾಶ ಕೋರಿ ರಾಜ್ಯಪಾಲರಿಗೆ ಯಡಿಯೂರಪ್ಪ ಬರೆದಿದ್ದ ಎರಡು ಪತ್ರಗಳನ್ನು ಬಿಜೆಪಿ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದರು. ನಾಳೆಯೇ ವಿಶ್ವಾಸಮತ ಯಾಚನೆಗೆ ಸಿದ್ಧ ಎಂದು ಜೆಡಿಎಸ್– ಕಾಂಗ್ರೆಸ್ ಪರ ವಕೀಲರು ಸುಪ್ರಿಂ ಕೋರ್ಟ್ ಗೆ ತಿಳಿಸಿದರು. ಇದಾದ ಬಳಿಕ, ವಿಶ್ವಾಸಮತ ಸಾಬೀತುಪಡಿಸಲು ನಾವೂ ಸಿದ್ಧ ಎಂದು ಬಿಜೆಪಿ ಪತ ವಕೀಲರು ತಿಳಿಸಿದರು. ಎಲ್ಲ ಶಾಸಕರೂ ಸದನದಲ್ಲಿ ಹಾಜರಿರಬೇಕು. ಸೂಕ್ತ ಭದ್ರತೆಗೆ ವ್ಯವಸ್ಥೆ ಮಾಡಲು ಡಿಜಿಪಿಗೆ ಸೂಚನೆ ನೀಡಿ ಪೀಠ ಆದೇಶಿಸಿದೆ. ನಾಳೆಯೇ ಬಹುಮತ ಸಾಬೀತು ಪಡಿಸುವಂತೆ ಸೂಚಿಸಲು ಸುಪ್ರೀಂ ಕೋರ್ಟ್ ಇಂಗಿತ ವ್ಯಕ್ತಪಡಿಸಿತು. ಆದರೆ, ಯಡಿಯೂರಪ್ಪ ಪರ ವಕೀಲ ರೋಹಟಗಿ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಬಹುಮತ ಸಾಬೀತು ವೇಳೆ ವಿಡಿಯೊ ಚಿತ್ರೀಕರಣಕ್ಕೆ ಮಾಧ್ಯಮಗಳಗೆ ಅವಕಾಶ ಬೇಡ ಎಂದು ಪೀಠ ಹೇಳಿತು. ಆಂಗ್ಲೋ ಇಂಡಿಯನ್ ಸದಸ್ಯೆ ನೇಮಕಬೇಡ ಎಂದು ಪೀಠ ಹೇಳಿತು. ಬಹುಮತ ಸಾಬೀತಿಗೆ ನಮ್ಮ ಸದಸ್ಯರು ಸಿದ್ಧ ಎಂದು ಕಾಂಗ್ರೆಸ್ ವಕೀಲ ಸಿಂಘ್ವಿ ತಿಳಿಸಿದರು. ಅದಕ್ಕೆ, ರೋಹಟಗಿ ವಿರೋಧ ವ್ಯಕ್ತಪಡಿಸಿದರು. ಶನಿವಾರವೇ ಬಹುಮತ ಸಾಬೀತುಪಡಿಸಲಿ ಎಂಬ ಕಾಂಗ್ರೆಸ್ ಕೋರಿಕೆಗೆ ಶನಿವಾರ, ಭಾನುವಾರ ಬೇಡ ಎಂದು ರೋಹಟಗಿ ತಿಳಿಸಿದರು. ಇದನ್ನು ಪೀಠ ತಿರಸ್ಕರಿಸಿತು. ಹಿಂದುಸ್ತಾನ ಸಮಾಚಾರ/ಆರ್.ಎಸ್/ಯ.ಮ
image