Hindusthan Samachar
Banner 2 शुक्रवार, अप्रैल 19, 2019 | समय 15:57 Hrs(IST) Sonali Sonali Sonali Singh Bisht

ಮಡಿಕೇರಿಯಲ್ಲಿ ಪರಿಸರವಾದಿಗಳ ಪ್ರತಿಭಟನೆ

By HindusthanSamachar | Publish Date: Dec 8 2018 9:24PM
ಮಡಿಕೇರಿಯಲ್ಲಿ ಪರಿಸರವಾದಿಗಳ ಪ್ರತಿಭಟನೆ
ಮಡಿಕೇರಿ, ಡಿ.08(ಹಿ.ಟ್ರದ ಪೂರ್ವ ಹಿಮಾಲಯ ಶ್ರೇಣಿಗಳು ಮತ್ತು ಪಶ್ಚಿಮ ಘಟ್ಟ ಶ್ರೇಣಿಗಳು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತವೆ. ನಾವು ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲೆ ಇದ್ದು, ನಾವಿರುವ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಖ್ಯಾತ ಪರಿಸರವಾದಿ, ಚಲನಚಿತ್ರ ನಟ, ನಿರ್ದೇಶಕ ಸುರೇಶ್ ಹೆಬ್ಳೀಕರ್ ಹೇಳಿದ್ದಾರೆ. ನಗರದ ಗಾಂಧಿ ಮೈದಾನದ ಬಯಲು ರಂಗಮಂದಿರದಲ್ಲಿ ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆಯಿಂದ ’ಕೊಡಗು ಉಳಿಸಿ ಕಾವೇರಿ ನದಿ ಉಳಿಸಿ- ಕೊಡಗು ಮೂಒಲಕ ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಮಾರಕ ಯೋಜನೆ ನಿಲ್ಲಿಸಿ’ ಘೋಷಣೆಯಡಿ ಆಯೋಜಿತ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಪಶ್ಚಿಮ ಘಟ್ಟಗಳು ಮಳೆ, ನೀರು, ತೋಟಗಾರಿಕೆ ಮತ್ತು ಔಷಧೀಯ ಸಂಪನ್ಮೂಲಗಳಿಂದ ಕೂಡಿದ್ದು, ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಘಟ್ಟ ಶ್ರೇಣಿಗಳ ಮೇಲೆ ಅಭಿವೃದ್ಧಿಯ ಹೆಸರಿನಲ್ಲಿ ನಾಲ್ಕು ಲಕ್ಷ ಮರ ಹನನಕ್ಕೆ ತಯಾರಿ ನಡೆಸಲಾಗಿದೆ. ಇದು ಪರಿಸರ ಸಂರಕ್ಷಣೆಗೆ ಮಾರಕವಾದದ್ದು. ಯಾವುದೇ ಸರ್ಕಾರವಿರಲಿ, ಯಾರೇ ಇರಲಿ ಏರುತ್ತಿರುವ ಜಾಗತಿಕ ತಾಪಮಾನದ ಕುರಿತು ಚಿಂತನೆ ನಡೆಸಬೇಕಾಗಿದೆ. ವಿಶ್ವ ಮಟ್ಟದಲ್ಲಿ ಜಗತ್ತು ಜಾಗತಿಕ ತಾಪಮಾನದ ಹಿನ್ನೆಲೆಯಲ್ಲಿ ಹಾಳಾಗುತ್ತಿರುವ ಕುರಿತು ಚಿಂತನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ನಾವು ವಿನಾಶದೆಡೆಗೆ ಸಾಗುತ್ತಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು. ಜೇಬು ತುಂಬಿ ಕೊಳ್ಳಲು ಯೋಜನೆಗೆ ಬೆಂಬಲ-ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆ ಅಧ್ಯಕ್ಷ ರಾಜೀವ್ ಬೋಪಯ್ಯ ಮಾತನಾಡಿ, ಕೊಡಗಿನ ಪರಿಸರ ಸಂರಕ್ಷಣೆಯ ಹಿನ್ನೆಲೆಯಲ್ಲಿ ಇಂದಿನಿಂದ ಹೋರಾಟ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ರ‍್ಯಾಲಿಗಳನ್ನು ನಡೆಸುವುದಾಗಿ ಸ್ಪಷ್ಟಪಡಿಸಿ, ಜಿಲ್ಲೆಯ ಪರಿಸರ ನಾಶಕ್ಕೆ ಕಾರಣವಾಗುವ ೭೨ ಮೀಟರ್ ವಿಸ್ತಿರ್ಣದ ೧೦ ಸಾವಿರ ಕೋಟಿ ವೆಚ್ಚದ ಚತುಷ್ಪಥ ರಸ್ತೆ ಆಗಬೇಕೆನ್ನುವವರ ಉದ್ದೇಶ, ಯೋಜನೆಯಿಂದ ಜೇಬು ತುಂಬಿಸಿಕೊಳ್ಳುವುದೇ ಆಗಿದೆಯೆಂದು ತೀಕ್ಷ್ಣವಾಗಿ ನುಡಿದರು. ಯುಕೋ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಚತುಷ್ಪಥ ರಸ್ತೆಯಿಂದ ಕೊಡಗಿಗೆ ಯಾವುದೇ ಪ್ರಯೋಜನವಿಲ್ಲ. ಇದರಿಂದ ಅಭಿವೃದ್ಧಿ ಸಾಧ್ಯವೆನ್ನುವ ಮೂಲಕ ಮಂಕು ಬೂದಿ ಎರಚುವುದನ್ನು ಬಿಡಿ ಎಂದು ಯೋಜನೆ ಪರವಾಗಿರುವವರನ್ನು ಆಗ್ರಹಿಸಿ, ಪ್ರಸ್ತುತ ಸರ್ಕಾರಗಳು ವಿವಿಧ ಮಾರಕ ಯೋಜನೆಗಳನ್ನು ಜಾರಿಗೆ ತರುವ ಪ್ರಯೋಗ ಶಾಲೆಯನ್ನಾಗಿಯಷ್ಟೆ ಕೊಡಗನ್ನು ನೋಡುತ್ತಿದೆಯೆಂದು ಬೆಸರ ವ್ಯಕ್ತಪಡಿಸಿ, ನಾವು ಈಗಿನಿಂದಲೆ ಇಂತಹ ಮಾರಕ ಯೋಜನೆಗಳ ವಿರುದ್ಧ ಜನಜಾಗೃತಿಗೆ ಮುಂದಾಗಬೇಕು. ಇಲ್ಲವಾದಲ್ಲಿ ಇಂದು ನಮ್ಮ ಕಾರ್ಯಕ್ರಮಕ್ಕೆ ಅಡ್ಡಿಯನ್ನುಂಟುಮಾಡಿದ ಮನಸ್ಥಿತಿಗಳಿಂದ ಜಿಲ್ಲೆಯ ಪ್ರತಿ ಮನೆ ಮನೆಗಳಲ್ಲಿ ದೌರ್ಜನ್ಯಗಳು ನಡೆಯಬಹುದೆಂದು ಕಳವಳ ವ್ಯಕ್ತಪಡಿಸಿದರು. ದೂರು ದಾಖಲಿಸುತ್ತೇವೆ- ಕಾವೇರಿ ಸೇನಾ ಸಂಘಟನೆಯ ಅಧ್ಯಕ್ಷ ಕಿಮ್ಮುಡಿರ ರವಿ ಚಂಗಪ್ಪ ಮಾತನಾಡಿ, ಕೊಡಗಿಗೆ ಮಾರಕವಾದ ಯೋಜನೆಗಳ ಅನುಷ್ಟಾನವನ್ನು ನಾವು ವಿರೋಧಿಸಿದರೆ, ಎ.ಕೆ.ಸುಬ್ಬಯ್ಯ ಅವರು, ರೈಲ್ವೆ, ಚತುಷ್ಪಥ ರಸ್ತೆಗಳು ಬೇಕೆಂದು ಆಗ್ರಹಿಸಿ, ಪರಿಸರವಾದಿಗಳ ವಿರುದ್ಧ ಹೇಳಿಕೆ ನೀಡುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಇಂದಿನ ತಮ್ಮ ಸಭೆಗೆ ಅಡ್ಡಿ ಮಾಡಿದವರ ವಿರುದ್ಧ ದೂರು ದಾಖಲಿಸಿ ತಕ್ಕ ಪಾಠ ಕಲಿಸುವುದಾಗಿ ಸ್ಪಷ್ಟಪಡಿಸಿದರು. ಮನವಿ ಸಲ್ಲಿಕೆ - ಇದೇ ಸಂದರ್ಭ ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆಯ ಅಧ್ಯಕ್ಷ ರಾಜೀವ್ ಬೋಪಯ್ಯ, ಕರ್ನಲ್ ಸಿ.ಪಿ.ಮುತ್ತಣ್ಣ ಅವರು ಜಾತ್ಯತೀತ ಜನತಾದಳ ಪಕ್ಷ ರಾಜ್ಯ ಉಪಾಧ್ಯಕ್ಷರಾದ ಮಾಂಗೇರ ಪದ್ಮಿನಿ ಪೊನ್ನಪ್ಪ ಅವರ ಮೂಲಕ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿಯನ್ನು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿ ಮಾತನಾಡಿದ ಪದ್ಮಿನಿ ಪೊನ್ನಪ್ಪ, ಕೊಡಗಿನ ಪರಿಸರದ ಬಗ್ಗೆ ಕಾಳಜಿ ವಹಿಸಿ, ಇಲ್ಲಿ ಯಾವ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಬಹುದು ಎನ್ನುವ ವಿಚಾರಗಳ ಬಗ್ಗೆ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ನಿಯೋಗ ತೆರಳಲು ಅಗತ್ಯ ವ್ಯವಸ್ಥೆಗಳನ್ನು ಮಾಡುವ ಭರವಸೆ ನೀಡಿದರು. ::: ಬೇಡಿಕೆಗಳು ::: ವೇದಿಕೆ ನೀಡಿದ ಮನವಿಯಲ್ಲಿ ಪ್ರಮುಖವಾಗಿ ಕೊಡಗು ಮೈಸೂರು ಬೆಂಗಳೂರು ಮುಂತಾದ ದೊಡ್ಡ ನಗರಗಳ ವಾಟರ್ ಟ್ಯಾಂಕ್ ಎಂದು ಪರಿಗಣಿಸಲಾಗಿದ್ದು, ಕೊಡಗಿನ ಪರಿಸರವು ನಾಶವಾದರೆ, ಈ ಮಹಾ ನಗರಗಳಿಗೆ ಸಂಕಷ್ಟ ಎದುರಾಗಲಿದೆಯೆಂದು ತಿಳಿಸಲಾಗಿದೆ. ಕೊಡಗು ಭೂ ಪ್ರದೇಶದಲ್ಲಿ ಸುಮಾರು ಶೇ.೩೨ ಕಾಡು, ಶೇ.೩೦ ಕಾಫಿ ತೋಟ ಮತ್ತು ಶೇ.೧೨ ತೇವ ಪ್ರದೇಶಗಳಿದ್ದು, ಇದು ಪ್ರಾಕೃತಿಕ ಸಮತೋಲನವನ್ನು ಕಾಪಾಡಿಕೊಂಡು ಬರುತ್ತಿದೆ ಎನ್ನುವುದನ್ನು ಪರಿಗಣಿಸಬೇಕು, ವಿವಿಧ ಅಭಿವೃದ್ಧಿ ಯೋಜನೆಗಳು ಹಾಗೂ ಹಲವಾರು ಕಾರಣಗಳಿಗಾಗಿ ಕೊಡಗು ಭೂ ಪ್ರದೇಶವು ತೀವ್ರವಾದ ಒತ್ತಡದಲ್ಲಿದೆ. ಕೊಡಗಿನ ಮೂಲಕ ಹಾದು ಹೋದ ೪೦೦ ಕೆ.ವಿ. ಹೈಟೆನ್ಶನ್ ವಿದ್ಯುತ್ ಲೈನ್ ಮತ್ತು ಈಗ ೨ ರೈಲು ಮಾರ್ಗ ಮತ್ತು ಬಹುಪಥದ ಹೆದ್ದಾರಿಗಳು ಲಕ್ಷಗಟ್ಟಲೆ ಮರಗಳ ಹನನಕ್ಕೆ ಕಾರಣವಾಗಿ ಕೊಡಗಿನ ಪರಿಸರಕ್ಕೆ ವಿನಾಶವನ್ನು ತರುತ್ತದೆ. ಕೊಡಗಿನ ಮೂಲಕ ರೈಲು ಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇತರ ಪರಿಣಾಮಗಳಿಂದಲೆ ಮಾಲಿನ್ಯ, ಆನೆ ಮಾನವ ಸಂಘರ್ಷ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅಂದಾಜು ವೆಚ್ಚ ಸುಮಾರು ೧೬೦೦ ಕೋಟಿಯಾಗಿದ್ದು, ಕೊಡಗಿನ ಜನ ಮಳೆ ಮತ್ತು ಭೂ ಕುಸಿತದಿಂದ ಚೇತರಿಸಿಕೊಳ್ಳುವುದಕ್ಕೆ ಮೊದಲೇ ಈ ವಿನಾಶಕಾರಿ ಯೋಜನೆಯ ಮೇಲೆ ಹಣ ವೆಚ್ಚ ಮಾಡುವುದು ಅನ್ಯಾಯ ಎಂಬ ಭಾವನೆ ಜನರಲ್ಲಿದೆಯೆಂದು ತಿಳಿಸಲಾಗಿದೆ. ಪ್ರತಿನಿತ್ಯ ೧೦ ಸಾವಿರಕ್ಕಿಂತಲೂ ಹೆಚ್ಚಿನ ವಾಹನಗಳು ಅಸ್ತಿತ್ವದಲ್ಲಿದ್ದರೆ ಮಾತ್ರ ನಾಲ್ಕು ಪಥದ ಹೆದ್ದಾರಿ ನಿರ್ಮಾಣದ ಅಗತ್ಯತೆ ಇದೆ. ಈ ವಿಷಯವನ್ನು ತನಿಖೆ ಮತ್ತು ಜವಾಬ್ದಾರಿಯುತವಾಗಿ ಜನರ ಮುಂದಿಡಲು ವಿನಂತಿಸುತ್ತೇವೆಂದು ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆ ಹೇಳಿದೆ. ಹಿಂದೂಸ್ತಾನ ಸಮಾಚಾರ / ಎಸ್ ಕೆ ಎಲ್ / ಎಂ ವೈ
लोकप्रिय खबरें
फोटो और वीडियो गैलरी
image