Hindusthan Samachar
Banner 2 बुधवार, मार्च 20, 2019 | समय 04:58 Hrs(IST) Sonali Sonali Sonali Singh Bisht

ಟಿಪ್ಪು ಒಬ್ಬ ದೇಶ ಭಕ್ತ

By HindusthanSamachar | Publish Date: Nov 10 2018 7:48PM
ಟಿಪ್ಪು ಒಬ್ಬ ದೇಶ ಭಕ್ತ
ಚಿತ್ರದುರ್ಗ, ನ೧೦(ಹಿಸ)-ಬ್ರಿಟೀಷರನ್ನು ದೇಶದಿಂದ ತೊಲಗಿಸಲು ತನ್ನ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದ ಟಿಪ್ಪು ಸುಲ್ತಾನ್ ಕೇವಲ ಮುಸ್ಲಿಂ ಸಮುದಾಯಕಾಗಿ ಹೋರಾಡಿಲ್ಲ, ಹೀಗಾಗಿ ಟಿಪ್ಪುವನ್ನು ಒಬ್ಬ ದೇಶಭಕ್ತನಂತೆ ಗೌರವದಿಂದ ಕಾಣುವ ಅಗತ್ಯವಿದೆ ಎಂದು ರಾಜ್ಯ ಕಾರ್ಮಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟರಮಣಪ್ಪ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ, ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ತ.ರಾ.ಸು. ರಂಗಮಂದಿರದಲ್ಲಿ ಶನಿವಾರದಂದು ಏರ್ಪಡಿಸಿದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಬ್ರಿಟೀಷರ ವಿರುದ್ಧ ಹೋರಾಡಿದ ಪ್ರಮುಖ ರಾಜರುಗಳಲ್ಲಿ, ಟಿಪ್ಪು ಸುಲ್ತಾನ್ ಪ್ರಮುಖ. ಟಿಪ್ಪು ಸುಲ್ತಾನ್ ತನ್ನ ಪ್ರಾಣವನ್ನೇ ಪಣವಾಗಿಟ್ಟು, ಬ್ರಿಟೀಷರನ್ನು ಈ ನೆಲದಿಂದ ತೊಲಗಿಸಲು ಹೋರಾಡಿದ ಅಪ್ರತಿಮ ದೇಶಭಕ್ತ. ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಸತ್ಯ ಸಂಗತಿಯಾಗಿದೆ. ಇತಿಹಾಸವನ್ನು ತಿಳಿದಿದ್ದರೂ ಕೂಡ, ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ವಿರೋಧಿಸುವುದು ಸರಿಯಲ್ಲ. ಟಿಪ್ಪು ಜಯಂತಿ ವಿರೋಧಿಸುವವರು ಇತಿಹಾಸವನ್ನು ಸರಿಯಾಗಿ ಅರಿಯದವರು. ಟಿಪ್ಪು ಕೇವಲ ಮುಸ್ಲಿಂ ಸಮುದಾಯಕ್ಕಾಗಿ ಮಾತ್ರ ಹೋರಾಡಿಲ್ಲ. ದೇಶಕ್ಕಾಗಿ, ನಾಡಿನಲ್ಲಿದ್ದ ಎಲ್ಲ ಧರ್ಮೀಯರ ಪ್ರತಿನಿಧಿಯಾಗಿ ಬ್ರಿಟೀಷರ ವಿರುದ್ಧ ಹೋರಾಡಿದ. ಬೇರೆ ಬೇರೆ ಧರ್ಮೀಯರ ಜಯಂತಿ, ಸಮಾರಂಭಗಳಿಗೆ ವಿರೋಧಿಸದ ಕೆಲವರು, ಕೇವಲ ಟಿಪ್ಪು ಜಯಂತಿಗೆ ಮಾತ್ರ ವಿರೋಧಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಕೆಲ ವಿರೋಧಿ ಶಕ್ತಿಗಳು ದೇಶದಲ್ಲಿ ಕೋಮುವಾದದ ವಿಷಬೀಜ ಬಿತ್ತಿ, ಜನರನ್ನು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ. ಈ ದೇಶದ ಜವಾಬ್ದಾರಿಯುತ ನಾಗರಿಕರಾಗಿರುವ ನಾವು, ಸೌಹಾರ್ದಯುತವಾಗಿ ಅಣ್ಣ ತಮ್ಮಂದಿರಂತೆ ಬಾಳೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟರಮಣಪ್ಪ ಅವರು ನುಡಿದರು. ಅಧ್ಯಕ್ಷತೆ ವಹಿಸಿದ್ದ, ಸಂಸ್. ಚಂದ್ರಪ್ಪ ಅವರು ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಹೇಳಿದಂತೆ ಸಮಾನತೆ ಇಲ್ಲದ್ದು, ಸಂವಿಧಾನವೇ ಅಲ್ಲ. ಸಂವಿಧಾನವನ್ನು ಗೌರವಿಸುವವರು ಯಾರನ್ನೂ ವಿರೋಧಿಸಬಾರದು. ಚಿತ್ರದುರ್ಗ ಜಿಲ್ಲೆಗೂ ಟಿಪ್ಪುವಿನ ಇತಿಹಾಸಕ್ಕೂ ಬಹಳಷ್ಟು ನಂಟಿದೆ. ಜಿಲ್ಲೆಯ ತಿಪ್ಪೇರುದ್ರಸ್ವಾಮಿ ದೇವರ ಬಗ್ಗೆ ಅಪಾರವಾದ ನಂಬಿಕೆ ಹಾಗೂ ಗೌರವ ಹೊಂದಿದ್ದ ಹೈದರಲಿ, ಇದೇ ನಂಬಿಕೆಗಾಗಿ ತನ್ನ ಮಗನಿಗೆ ಟಿಪ್ಪು ಎಂಬ ಹೆಸರಿಟ್ಟ ಎಂಬುದಾಗಿ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಈ ನಾಡಿಗೆ ರೇಷ್ಮೆ, ಗುಡಿಕೈಗಾರಿಕೆಯನ್ನು ಪರಿಚಯಿಸಿಕೊಟ್ಟ ಟಿಪ್ಪು ಸುಲ್ತಾನ್, ತನ್ನ ಆಸ್ತಾನದಲ್ಲಿ ೦೯ ಜನ ಮಂತ್ರಿಗಳನ್ನು ನೇಮಿಸಿಕೊಂಡಿದ್ದರು. ಈ ಪೈಕಿ ೦೭ ಜನ ಹಿಂದೂಗಳೇ ಆಗಿದ್ದರು. ಚರಿತ್ರೆ ಹೀಗಿರುವಾಗ ಟಿಪ್ಪು ಹೇಗೆ ಧರ್ಮ ವಿರೋಧಿಯಾಗಲು ಸಾಧ್ಯ. ಎಲ್ಲ ಧರ್ಮಗಳನ್ನು ಗೌರವಿಸುವವರೆ ನಿಜವಾದ ದೇಶಭಕ್ತ. ಹೀಗಾಗಿ ಟಿಪ್ಪು ಕೂಡ ಒಬ್ಬ ನಿಜವಾದ ದೇಶಭಕ್ತ. ಟಿಪ್ಪು ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಂಶೋಧನಾ ಕೇಂದ್ರ ಸ್ಥಾಪಿಸಲು, ಸಮಾಜದ ಮುಖಂಡರು ಮನವಿ ಸಲ್ಲಿಸಿದ್ದು, ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಒತ್ತಾಯಿಸಲಾಗುವುದು ಎಂದರು. ಹರಿಹರದ ಎಸ್.ಜೆ.ವಿ.ಪಿ. ಕಾಲೇಜಿನ ಪ್ರಾಧ್ಯಾಪಕ ಎ.ಬಿ. ರಾಮಚಂದ್ರಪ್ಪ ಅವರು ವಿಶೇಷ ಉಪನ್ಯಾಸ ನೀಡಿ, ಟಿಪ್ಪು ಸುಲ್ತಾನ್ ಸ್ವತಂತ್ರ ಭಾರತಕ್ಕಾಗಿ ರಕ್ತ ಹರಿಸಿದ ಮೊದಲ ರಾಜ. ಬ್ರಿಟೀಷರಿಂದ ಭಾರತಕ್ಕೆ ಕಂಟಕವಿದೆ ಎಂದು ಮೊದಲು ಅರಿತವನು ಟಿಪ್ಪು. ಟಿಪ್ಪು ತನ್ನ ಕಾಲಾವಧಿಯಲ್ಲಿ ಅನೇಕ ಸಮಾಜ ಸುಧಾರಣೆಗಳನ್ನು ಮಾಡಿದ್ದು, ಸನಾತನ ಶೋಷಣೆಯನ್ನು ನಿಯಂತ್ರಿಸಿದ್ದು, ಮಹಿಳೆಯರಿಗೆ ಗೌರವಯುತವಾಗಿ ಬಾಳಲು ಅನುವು ಮಾಡಿಕೊಟ್ಟಿದ್ದು, ಅಲ್ಲದೆ ಆಗಿನ ಕಾಲದಲ್ಲೇ ಭೂಸುಧಾರಣೆ ನೀತಿಯನ್ನು ಜಾರಿಗೆ ತಂದಿದ್ದರು. ಶೃಂಗೇರಿ ಮಠಕ್ಕೆ ದಾನ ಧರ್ಮ ನೀಡಿದ್ದು, ಅಲ್ಲದೆ ಶಾರದ ಪೀಠದಲ್ಲಿರುವ ಸಾಲಿಗ್ರಾಮ ಟಿಪ್ಪು ಸುಲ್ತಾನ್ ನೀಡಿದ್ದಾಗಿದೆ. ಹೀಗಾಗಿ ಟಿಪ್ಪು ದೇಶಕ್ಕಾಗಿ ಹೋರಾಡಿದನೇ ಹೊರತು ಧರ್ಮಕಾರಣಕ್ಕಾಗಿ ಅಲ್ಲ. ಚರಿತ್ರೆಯನ್ನು ಸರಿಯಾಗಿ ಅಧ್ಯಯನ ಮಾಡಿದಾಗ ಟಿಪ್ಪು ಬಗ್ಗೆ ನಿಜವಾದ ವಿಷಯ ಅರಿಯಲು ಸಾಧ್ಯ. ಆದರೆ ಕೆಲ ಇತಿಹಾಸಕಾರರು ಕೋಮುವಾದದ ಮನೋಭಾವವಿಟ್ಟುಕೊಂಡು, ಕಲ್ಪಿತ ಚರಿತ್ರೆಯಿಂದ, ಇತಿಹಾಸವನ್ನು ತಿರುಚಿ, ಟಿಪ್ಪು ಬಗ್ಗೆ ಇಲ್ಲ ಸಲ್ಲದ ಸಂಗತಿಗಳನ್ನು ಬಿಂಬಿಸಿರುವುದು ಸರಿಯಲ್ಲ ಎಂದರು. ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪು ಖಾಸಿಂ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಟಿಪ್ಪು ಜಯಂತಿಯನ್ನು ದೇಶದ ನಾಲ್ಕು ರಾಜ್ಯಗಳಲ್ಲಿ ಮಾತ್ರವಲ್ಲ, ಸೌದಿ ಅರೇಬಿಯಾ ದೇಶದಲ್ಲೂ ಆಚರಿಸಲಾಗುತ್ತಿದೆ. ಟಿಪ್ಪು ಸುಲ್ತಾನ್ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಂಶೋಧನಾ ಕೇಂದ್ರ ಸ್ಥಾಪಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಬರುವ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಟಿಪ್ಪು ವಂಶಸ್ತರನ್ನು ಜಿಲ್ಲೆಗೆ ಕರೆಸಿ, ಜಿಲ್ಲಾ ಮಟ್ಟದಲ್ಲಿ ಬೃಹತ್ ಸಮಾವೇಶ ಏರ್ಪಡಿಸುವ ಉದ್ದೇಶ ಹೊಂದಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ.ಅರುಣ್, ಉಪವಿಭಾಗಾಧಿಕಾರಿ ವಿಜಯಕುಮಾರ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಅನ್ವರ್‌ಭಾಷಾ, ನಗರಸಭೆ ಸದಸ್ಯ ಮಹಮದ್ ಅಹಮದ್ ಪಾಷಾ, ಗಣ್ಯರಾದ ಶಿವಮೂರ್ತಿ ನಾಯಕ್ ಮುಂತಾದವರು ಭಾಗವಹಿಸಿದ್ದರು. ನಗರಸಭೆ ಪೌರಾಯುಕ್ತ ಚಂದ್ರಪ್ಪ ಸ್ವಾಗತಿಸಿದರು. ಎಸ್.ಎಲ್. ರಾಘವೇಂದ್ರ ಮತ್ತು ಸಂಗಡಿಗರು ಇದೇ ಸಂದರ್ಭದಲ್ಲಿ ಗೀತಗಾಯನ ಪ್ರಸ್ತುತಪಡಿಸಿದರು. ಹಿಂದೂಸ್ತಾನ್ ಸಮಾಚಾರ್ / ಪ್ರಬಿ/ ಎಂವೈ
लोकप्रिय खबरें
फोटो और वीडियो गैलरी
image