By HindusthanSamachar | Publish Date: Jul 14 2018 11:07AM
ಗುವಾಹಟಿ,ಜು.14 (ಹಿ.ಸ್ಸಾಂನ ಮೊದಲ ತೃತೀಯ ಲಿಂಗಿ ನ್ಯಾಯಾಧೀಶರಾಗಿ ಸ್ವಾತಿ ಬಿಧಾನ್ ಬರುಅಹ್ ಅವರು ನೇಮಕವಾಗಿದ್ದು, ಅವರು ಲೋಕ್ ಅದಾಲತ್ನಲ್ಲಿ ಇಂದಿನಿಂದ ತಮ್ಮ ಕಾರ್ಯ ಆರಂಭಿಸಲಿದ್ದಾರೆ.
ಕಮ್ರುಪ್ ಜಿಲ್ಲೆಯ ಕೋರ್ಟ್ ಸಂಖ್ಯೆ 25 ಹಾಗು ಸೆಷನ್ ಕೋರ್ಟ್ನಲ್ಲಿ ಅವರು ನ್ಯಾಯಾಧೀಶರಾಗಿ ಕಾರ್ಯಾರಂಭ ಮಾಡಲಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾವು ನ್ಯಾಯಾಧೀಶರಾಗಿ ನೇಮಕವಾಗಿರುವುದು ಸಮಾಜಕ್ಕೆ ಧನಾತ್ಮಕ ಸಂದೇಶವನ್ನು ರವಾನಿಸುತ್ತಿದ್ದು, ತೃತೀಯ ಲಿಂಗಿಗಳ ಬಗ್ಗೆ ತೋರಲಾಗುತ್ತಿರುವ ಅಸಮಾನತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಸಮಾಜವು ತೃತೀಯಲಿಂಗಿಗಳ ಸಾಮರ್ಥ್ಯವನ್ನು ಗುರುತಿಸಬೇಕು ಹಾಗು ಅವರನ್ನು ಘನತೆಯಿಂದ ಬಾಳಲು ಸಮಾನ ಅವಕಾಶಗಳನ್ನು ಕಲ್ಪಿಸಬೇಕು ಎಂದು ಹೇಳಿದರು. ವೃತ್ತಿನಿಷ್ಠೆ ಹಾಗು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು. ಈ ವೇಳೆ ತೃತೀಯ ಲಿಂಗಿಗಳ ಸಮಸ್ಯೆ ಬಗ್ಗೆ ಮಾತನಾಡಿದ ಅವರು, ತೃತೀಯ ಲಿಂಗಿಗಳನ್ನು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ (ಎಸ್ಆರ್ಸಿ)ನಲ್ಲಿ ದಾಖಲಿಸಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ದೇಶದಲ್ಲಿ ತೃತೀಯಲಿಂಗಿಯಾಗಿರುವ ಇಬ್ಬರು ಈಗಾಗಲೇ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದು, ಇದು ಮೂರನೇ ಪ್ರಕರಣವಾಗಿದೆ. ಪಶ್ಚಿಮಬಂಗಾಳದಲ್ಲಿ ಜ್ಯೋತಿ ಮಂಡಲ್ ದೇಶದ ಮೊದಲ ತೃತೀಯಲಿಂಗಿ ನ್ಯಾಯಾಧೀಶರಾಗಿದ್ದಾರೆ. ಅಂತೆಯೇ ಮಹಾರಾಷ್ಟ್ರದಲ್ಲಿ ವಿದ್ಯಾಕಾಂಬಳೆ ಎಂಬುವರು ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ/ಎಂ.ಎಸ್/ ಯ.ಮ